ಪಪಾವರಿನ್ -
ಗಸಗಸೆ (ಪಪಾವರ್ ಸಾಮ್ನಿಫೆರಮ್) ಗಿಡದಿಂದ ಪಡಯಲಾಗುವ ಅಫೀಮಿನಲ್ಲಿರುವ ಒಂದು ಮುಖ್ಯ ಸಸ್ಯಕ್ಷಾರ (ಆಲ್ಕಲಾಯಿಡ್).  1848ರಲ್ಲಿ ಮರ್ಕ್ ಎಂಬಾತ ಇದನ್ನು ಅಫೀಮಿನಿಂದ ಬೇರ್ಪಡಿಸಿದ.  ಕೃತಕವಾಗಿಯೂ ಸಂಶ್ಲೇಷಿಸಲಾಗಿದೆ.

	ಇದು ವಾಸನೆ, ರುಚಿ ಇಲ್ಲದ ಬಿಳೀಯ ಬಣ್ಣದ ಸ್ಫಟಿಕಾಕೃತಿಯ ಕಣಗಳಿಂದ ರಚಿತವಾದ ಪುಡಿ. ನೀರಿನಲ್ಲಿ ಕರಗುವುದಿಲ್ಲ. ಈಥರ್ ಮತ್ತು ತಣ್ಣನೆಯ ಆಲ್ಕೊ ಹಾಲಿನಲ್ಲಿ ಸ್ವಲ್ಪಮಟ್ಟಿಗೆ ಕರಗುತ್ತದೆ.  ಕ್ಲೋರೊಫಾರಮ್ ಮತ್ತು ಬಿಸಿ ಆಲ್ಕೋಹಾಲುಗಳಲ್ಲಿ ಚೆನ್ನಾಗಿ ಕರಗುವುದು. ನಯಸ್ನಾಯುಗಳ ಸಂಕುಚನವನ್ನು ಇದು ತಡೆಯುತ್ತದೆ.  ಆದ್ದರಿಂದ ಇದನ್ನು ಪಪಾವರಿನ್ ಹೈಡ್ರೊಕ್ಲೋರೈಡ್ ರೂಪದಲ್ಲಿ ಮೂತ್ರಪಿಂಡ, ಕರುಳು, ಗರ್ಭಕೋಶ, ಜಠರ, ಪಿತ್ತಕೋಶಗಳ ಸ್ನಾಯುಗಳ ಸಂಕುಚನ ನಿವಾರಣೆಗೆ ಬಳಸಲಾಗುತ್ತದೆ. ಎದೆಸೆರೆ ಬಿಗಿತ, ಗುಂಡಿಗೆ ಸ್ನಾಯುವಿನ ಗಿಡಿಕೆ, ರಕ್ತನಾಳಗಳ ಅಡಚಿಕೆ, ಕೂಡುಗರಣಿಕೆ ಮುಂತಾದ ರೋಗಗಳಲ್ಲೂ ಇದನ್ನು ಉಪಯೋಗಿಸುವುದುಂಟು. ಇದನ್ನು ಪದೇಪದೇ ಉಪಯೋಗಿಸಿದರೂ ದುಶ್ಚಟವಾಗಿ ಪರಿಣಮಿಸುವುದಿಲ್ಲ.  ಚುಚ್ಚುಮದ್ದಿನ ಇಲ್ಲವೆ ಮಾತ್ರೆಯ ರೂಪದಲ್ಲಿ ಇದನ್ನು ಕೊಡಬಹುದು.  ಉಪಯೋಗಿಸುವ ಪರಿಮಾಣ 0.12-0.25 ಗ್ರಾಮ್. ಪರಿಮಾಣ ಹೆಚ್ಚಾದರೆ ತೂಕಡಿಕೆ, ಮಲಬದ್ಧತೆ ಮತ್ತು ಹೊಟ್ಟೆಯಲ್ಲಿ ಸಂಕಟ ಉಂಟಾಗುವುವು.
(ಆರ್.ಎಸ್.ಎಲ್.;ಎಸ್.ಎನ್.ಎ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ